ಸಣ್ಣಕತೆಗಳ ಜನಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನ ರಂಗಮಂದಿರ ಶಿಕ್ಷಣ ಇಲಾಖೆಯ ಗೋದಾಮಾಗಿ ಪರಿವರ್ತನೆಯಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಯಲಿ ಎಂಬ ಉದ್ದೇಶದೊಂದಿಗೆ ಚಾಮರಾಜಪೇಟೆಯ ಶಂಕರಮಠದ ಬಳಿ ಇರುವ ಈ ಮಾಸ್ತಿ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸದ್ದಿಲ್ಲದೆ ವರ್ಷಗಳೇ ಕಳೆದುಹೋಗಿವೆ.
ಕಲಾ ಸರಸ್ವತಿಯ ದೇಗುಲವಾಗಬೇಕಿದ್ದ ರಂಗ ಮಂದಿರ ಪಾಳುಬಿದ್ದ ಕಟ್ಟಡದಂತೆ ಆಗಿದ್ದು ಕಾಯಕಲ್ಪಕ್ಕಾಗಿ ಕಾಯುತ್ತಿದೆ. ರಂಗಮಂದಿರವನ್ನು ಕನ್ನಡ ಸಾಹಿತ್ಯ ಪರಿಷತ್ ನಿರ್ವಹಣೆಗೆ ವಹಿಸಿದಲ್ಲಿ ಅದರ ಸ್ಥಾಪನೆಯ ಮೂಲ ಉದ್ದೇಶಕ್ಕೆ ಬಳಸಿಕೊಳ್ಳುವುದಾಗಿ ಮಾಸ್ತಿ ಅವರ 125ನೇ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ರಂಗಮಂದಿರವನ್ನು ಮಕ್ಕಳಿಗೆ ವಿತರಿಸುವ ಪುಸ್ತಕ ಹಂಚಿಕೆ ಮಾಡಲು ಮೀಸಲಿಟ್ಟಿದೆ.
ಉದ್ಧೇಶ ಸಫಲವಾಗಿಲ್ಲ: ರಂಗಮಂದಿರ ನಿರ್ಮಾಣ ಮಾಡುವ ಮೂಲ ಉದ್ದೇಶ ರಂಗ ಚಟುವಟಿಕೆ. ಆದರೆ ಇಲ್ಲಿ ಅಂತಹ ಚಟುವಟಿಕೆ ನಡೆಯುತ್ತಿಲ್ಲ. ಇದು ಮಾಸ್ತಿ ಹೆಸರಿಗೆ ಮಾಡುತ್ತಿರುವ ಅಪಚಾರ ಎನ್ನುವುದನ್ನೂ ತಿಳಿಯದಷ್ಟು ಸರ್ಕಾರದ ಆಡಳಿತ ಜಡ್ಡುಗಟ್ಟಿದೆ. ಸಂಬಂಧಪಟ್ಟ ಇಲಾಖೆಗೆ ವಹಿಸಿದರೆ ಅವರಾದರೂ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದು ಗಣ್ಯರ ಅಭಿಪ್ರಾಯ. ಆದರೆ ಇದಕ್ಕೂ ಅವಕಾಶ ಕೊಡದೆ ಸರ್ಕಾರವೂ ಕಾರ್ಯಕ್ರಮ ನಡೆಸಲು ಮುಂದಾಗದೆ ರಂಗಮಂದಿರವನ್ನು ಹೀಗೆ ಹಾಳುಗೆಡವುತ್ತಿರುವುದು ಬೇಸರದ ಸಂಗತಿ.
ಕನ್ನಡ ಸಾಹಿತ್ಯ ಪರಿಷತ್ ಸುಪರ್ದಿಗೆ ನೀಡುವಂತೆ ಮನವಿ: ರಂಗಮಂದಿರದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂಬುದನ್ನು ಅರಿತ ಕಸಾಪ ಅಧ್ಯಕ್ಷ ಮನು ಬಳಿಗಾರ್ ಇದನ್ನು ಕಸಾಪ ಸುಪರ್ದಿಗೆ ವಹಿಸಿದರೆ ಮೊದಲಿನಂತೆ ಮಂದಿರವನ್ನು ಸಜ್ಜುಗೊಳಿಸಿ ಪುನಾರಂಭ ಮಾಡುವುದಾಗಿ ತಿಳಿಸಿದ್ದಾರೆ.
ಇದಲ್ಲದಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾದರೂ ಇದರ ಬಗ್ಗೆ ತಲೆ ಕೆಡಿಸಿಕೊಂಡು ರಂಗಮಂದಿರವನ್ನು ಮೂಲ ಉದ್ದೇಶಕ್ಕೆ ಬಳಕೆಯಾಗುವಂತೆ ಮಾಡಲಿ ಎನ್ನುವುದು ಅವರ ಆಶಯ. ಸಂಬಂಧಪಟ್ಟ ಇಲಾಖೆ ಈ ಯೋಜನೆಯನ್ನು ಕೈಗೆತ್ತಿಕೊಂಡರೆ ಇದಕ್ಕೊಂದು ಶಾಶ್ವತ ರೂಪ ಬರುವುದು ಖಚಿತ.
30 ವರ್ಷಗಳಿಂದ ಶಿಕ್ಷಣ ಇಲಾಖೆ ವಶದಲ್ಲಿ
1980ರ ಜೂನ್ 28ರಂದು ರಂಗಮಂದಿರದನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ನೀಡಿ ಸರ್ಕಾರಿ ಶಾಲಾ ಮಕ್ಕಳಿಗೆ ಸರಬರಾಜಾಗುವ ಪುಸ್ತಕ ಇಡಲು ಸಭಾಂಗಣವಾಗಿ ಬಳಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ. ಇದೀಗ ಮೂವತ್ತು ವರ್ಷ ಕಳೆದರೂ ರಂಗಮಂದಿರ ಪುಸ್ತಕದ ಗೋದಾಮಾಗಿಯೇ ಉಳಿದಿದೆ. ತಿಂಗಳಿಗೊಮ್ಮೆ ಕಾರ್ಯಕ್ರಮ ನಡೆಸಲು ಸಂಘ-ಸಂಸ್ಥೆಗಳಿಗೆ ಬಾಡಿಗೆಗೆ ನೀಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಹೇಳುತ್ತಾರೆ.ಮಾಸ್ತಿ ರಂಗಮಂದಿರವನ್ನು ಕಲೆ
, ಸಾಹಿತ್ಯ ಚಟುವಟಿಕೆಗೆ ನೀಡುವ ಮೂಲಕ ಅವುಗಳ ಬೆಳವಣಿಗೆಗೆ ಅನುವು ಮಾಡಿಕೊಡಲಿ ಅಥವಾ ಹಿರಿಯ ನಾಗರಿಕರಿಗೆ ಚರ್ಚಾ ವೇದಿಕೆಯಾಗಲಿ. ಇಲ್ಲವೇ ಗ್ರಂಥಾಲಯವನ್ನಾಗಿಯಾದರೂ ಮಾಡಲಿ| ವಲ್ಲೀಶ್ ಎಸ್. ಕೌಶಿಕ್ ಸ್ಥಳೀಯರು
ಮಾಸ್ತಿ ಅವರ ಹೆಸರಿನಲ್ಲಿ ನಿರ್ಮಾಣ ವಾದ ರಂಗ ಮಂದಿರದ ಉದ್ದೇಶ ಸಫಲವಾಗಿಲ್ಲ ದಿರುವುದು ನೋವಿನ ಸಂಗತಿ. ಸರ್ಕಾರಕ್ಕೆ ಇದರ ನಿರ್ವಹಣೆ ಕಷ್ಟವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ಗೆ ಅಥವಾ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ಗಾದರೂ ನೀಡಲಿ. ಒಟ್ಟಿನಲ್ಲಿ ಮೂಲ ಉದ್ದೇಶ ಈಡೇರಬೇಕು.
| ಡಾ. ಮನು ಬಳಿಗಾರ್ ಕಸಾಪ ಅಧ್ಯಕ್ಷ.
ಶಾಲಾಭಿವೃದ್ಧಿಗೆ ಕಾರ್ಯಗಳಿಗೆ ಬಳಸುವಂತೆ ಸರ್ಕಾರ ಆದೇಶ ನೀಡಿದೆ. ಬಿಇಒ ಕಚೇರಿಗೆ ಸೂಕ್ತ ಜಾಗ ಇಲ್ಲದ ಕಾರಣ ಕಟ್ಟಡ ಬಳಸಲಾಗುತ್ತಿದೆ. ಮೊದಲು ಶಾಲಾ ಕಟ್ಟಡ ಎಂದೇ ಪರಿಗಣಿಸಲಾಗಿತ್ತು. ನಂತರ ರಂಗಮಂದಿರ ಎಂದು ನಾಮಕರಣ ಮಾಡಲಾಯಿತು. ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುತ್ತೇವೆ. ಶಾಲೆಗಳಿಗೆ ಪಠ್ಯಪುಸ್ತಕ ಹಂಚಿಕೆಯಾಗುವ ಏಪ್ರಿಲ್, ಜೂನ್, ಜುಲೈನಲ್ಲಷ್ಟೇ ಕೊಠಡಿ ಬಳಕೆಯಾಗುತ್ತದೆ.
No comments:
Post a Comment